Chief Editor
Manohar. R (Manu)
Photo Journalist
chitrataramanu@gmail.com
+91 9845549026
ದುರ್ಗ್ಯನ ಕಾಡುವ ಫೋಟೋ ಕಥನ ---ರೇಟಿಂಗ್: 4/5 ****
Posted date: 17 Sun, Mar 2024 11:20:01 AM
ನಿರ್ದೇಶನ : ಉತ್ಸವ್ ಗೋನವಾರ
ನಿರ್ಮಾಣ : ಮಸಾರಿ ಟಾಕೀಸ್
ಸಂಗೀತ : ರೈ ಹಿರೇಮಠ
ಛಾಯಾಗ್ರಹಕ : ದಿನೇಶ್ ದಿವಾಕರನ್
ತಾರಾಗಣ : ವೀರೇಶ್ ಗೋನಾರ, ಮಹಾದೇವ ಹಡಪದ, ಜಹಾಂಗೀರ್, ಸಂಧ್ಯಾ ಅರಕೆರೆ ಹಾಗೂ ಇತರರು...
   
ಅದು ಕೊರೋನಾ  ಮಹಾಮಾರಿ ಇಡೀ ವಿಶ್ವವನ್ನೇ ವ್ಯಾಪಿಸಿದ  ಸಮಯ. ಜನರು ತಮ್ಮ ಜೀವ ಉಳಿದರೆ ಸಾಕೆಂದು  ನಡೆಸಿದ ಹೋರಾಟ ಯಾರೂ ಮರೆಯಲಾಗದು. ಆ ಸಮಯದಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದಾಗ ದಿನಗೂಲಿ ಮಾಡಿ ಬದುಕುವ ಜನ ಕಂಗಾಲಾಗುತ್ತಾರೆ. ಹೊಟ್ಟೆಪಾಡಿಗಾಗಿ ಎಲ್ಲಿಂದಲೋ ವಲಸೆ ಬಂದ ಜನ ಊಟವಿಲ್ಲದೆ, ಊರು ಸೇರಲು ವಾಹನವಿಲ್ಲದೆ ಪರದಾಡುವ ಪರಿಸ್ಥಿತಿ  ಹೇಗೆ  ಹಲವಾರು ಸಮಸ್ಯೆಗಳನ್ನು ತಂದಿಟ್ಟಿತು ಅನ್ನುವುದು ಎಲ್ಲರಿಗೂ ಗೊತ್ತು.
 ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಕುಟುಂಬವೊಂದು ಎದುರಿಸುವ ನೋವು, ಸಂಕಷ್ಟಗಳನ್ನು ನಿರ್ದೇಶಕ ಉತ್ಸವ್ ಗೋನವಾರ ಅವರು ಫೋಟೋ ಚಿತ್ರದ ಮೂಲಕ ಕಾಡುವ ಕಥೆಯಾಗಿ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಗೋನವಾರ ಗ್ರಾಮದ ಬಾಲಕ ದುರ್ಗ್ಯನಿಗೆ (ವೀರೇಶ್ ಗೋನವಾರ) ತಾನು ಬೆಂಗಳೂರಿಗೆ ಹೋಗಿ ವಿಧಾನಸೌಧದ ಮುಂದೆ  ಹಾಗೂ ಡಿ ಬಾಸ್ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ  ಆಸೆ.
 
ತಾಯಿ ಗಂಗಮ್ಮನ(ಸಂಧ್ಯಾ ಅರಕೆರೆ)ಬಳಿ ಈ ಆಸೆ ಹೇಳಿಕೊಳ್ಳುವ  ದುರ್ಗ್ಯ,  ತಂದೆ(ಮಹದೇವ ಹಡಪದ್)ಕೆಲಸ ಮಾಡುತ್ತಿದ್ದ  ಬೆಂಗಳೂರಿಗೆ  ಕಳಿಸು ಎಂದು ಕೇಳುತ್ತಾನೆ. ತಾನು ಬೆಳಗಳೂರಿಗೆ ಹೋಗಿ ಫೋಟೋ ತೆಗೆಸಿಕೊಂಡೇ ಬರುತ್ತೇನೆಂದು  ಗೆಳೆಯರೊಂದಿಗೆ ಚಾಲೆಂಜ್ ಮಾಡಿರುತ್ತಾನೆ, ಮಗನ ಆಸೆಯಂತೆ  ಗಂಗಮ್ಮ, ಒಬ್ಬರನ್ನು ಜೊತೆಮಾಡಿ ಮಗನನ್ನು ಬೆಂಗಳೂರಿಗೆ  ಕಳಿಸುತ್ತಾಳೆ. ಆಗತಾನೇ  ಕೊರೋನಾ ಆರಂಭವಾದ ಸಮಯವದು. ಬೆಂಗಳೂರಿಗೆ ಬಂದ ಮಗನನ್ನು ತಂದೆ ವಿಧಾನಸೌಧಕ್ಕೆ ಕರೆದುಕೊಂಡು ಹೋಗುವಷ್ಟರಲ್ಲಿ ಲಾಕ್‌ಡೌನ್ ಜಾರಿಯಾಗುತ್ತದೆ. ಮುಂದೆ ಎದುರಾಗುವ ಸಂದರ್ಭ, ಸನ್ನಿವೇಶಗಳು ಬದುಕು ಎಷ್ಟು ಘೋರ ಎಂಬ ಸತ್ಯವನ್ನು ವೀಕ್ಷಕರಿಗೆ  ಮನವರಿಕೆ ಮಾಡುತ್ತವೆ. ಕೊನೆಗೂ ದುರ್ಗ್ಯ ವಿಧಾನಸೌಧದ ಮುಂದೆ ಫೋಟೋ ತೆಗೆಸಿಕೊಂಡನಾ, ಡಿಬಾಸ್ ಭೇಟಿ  ಮಾಡಿದನಾ,
 
ಆ ತಂದೆ  ಎದುರಿಸಿದ  ಸಂಕಷ್ಟಗಳು, ಇತ್ತ ಗಂಗಮ್ಮನ ಪರಿಸ್ಥಿತಿ  ಇಂಥ ಸೂಕ್ಷ್ಮ  ವಿಚಾರಗಳನ್ನು ತುಂಬಾ ನೈಜವಾಗಿ ಚಿತ್ರದಲ್ಲಿ  ಕಟ್ಟಿಕೊಡಲಾಗಿದೆ.
 
ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ತೊಂದರೆ, ಸಂಕಷ್ಟಗಳನ್ನು ಬಿಚ್ಚಿಡುವ ಫೋಟೋ ನೋಡುಗರನ್ನು ಕಾಡುತ್ತದೆ,  ಇಂಥ ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕೆಂಬ ಉದ್ದೇಶದಿಂದ ಚಿತ್ರವನ್ನು ರಿಲೀಸ್ ಮಾಡೋ ಜವಾಬ್ದಾರಿಯನ್ನು ನಟ ಪ್ರಕಾಶ್‌ರಾಜ್ ಹೊತ್ತಿದ್ದಾರೆ. ಹಿರೇಮಠ ಅವರ ಸಂಗೀತ, ದಿನೇಶ್ ದಿವಾಕರನ್ ಅವರ ಕ್ಯಾಮೆರಾ ವರ್ಕ್  ಚೆನ್ನಾಗಿದೆ.
 ತಂದೆ ಪಾತ್ರದಲ್ಲಿ ಮಹಾದೇವ ಹಡಪದ್, ತಾಯಿ ಪಾತ್ರದಲ್ಲಿ ಸಂಧ್ಯಾ ಅರಕೆರೆ ಸಹಜ ಅಭಿನಯ ನೀಡಿದ್ದಾರೆ.  ಕಾಕನ ಪಾತ್ರದಲ್ಲಿ ಜಹಾಂಗೀರ್ ಗಮನ ಸೆಳೆಯುತ್ತಾರೆ. ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಇಂತಹ ನೈಜತೆಗೆ ಹತ್ತಿರವಿರುವ ಚಿತ್ರವನ್ನು  ಒಮ್ಮೆ ನೋಡಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದುರ್ಗ್ಯನ ಕಾಡುವ ಫೋಟೋ ಕಥನ ---ರೇಟಿಂಗ್: 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.